1711-65. ರಷ್ಯನ್ ಕವಿ ಮತ್ತು ವಿಮರ್ಶಕ. ಈತನನ್ನು ಆಧುನಿಕ ರಷ್ಯನ್ ಸಾಹಿತ್ಯದ ಮೂಲಪುರುಷ ಎನ್ನಬಹುದು. ಬಡಮನೆತನದಲ್ಲಿ ಹುಟ್ಟಿದ ಈತ ಕಷ್ಟದಿಂದ ವಿದ್ಯಾಭ್ಯಾಸ ಮಾಡಿ ವಿಜ್ಞಾನ ಅಕಾಡೆಮಿಯಲ್ಲಿ ಉಪಪ್ರಾಧ್ಯಾಪಕನಾಗಿ ಕೆಲಸ ಮಾಡಿದ. ಈತನದು ವಿಶ್ವಕೋಶದಂಥ ಪ್ರತಿಭೆ. ಇವನ ಆಸಕ್ತಿಯನ್ನು ಸೆಳೆದ ವಿಷಯಗಳ ವೈವಿಧ್ಯ ಅಚ್ಚರಿಯನ್ನುಂಟುಮಾಡುತ್ತವೆ. ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತವಿಜ್ಞಾನ, ವ್ಯಾಕರಣ, ಚರಿತ್ರೆ, ಕಾವ್ಯ-ಎಲ್ಲವನ್ನೂ ಅಭ್ಯಾಸ ಮಾಡಿ ಹಲವು ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆ ಮಾಡಿದ. ಈತನ ಜೀವನದಲ್ಲಿ ಪ್ರಬಲವಾಗಿದ್ದ ಶಕ್ತಿಗಳು ಎರಡು: ದೇಶಭಕ್ತಿ, ವಿಜ್ಞಾನ ಪ್ರೇಮ. ಈತನೊಬ್ಬ ಪ್ರಯೋಗಕಾರ. ಛಂದಸ್ಸು ಮತ್ತು ಶೈಲಿಗಳಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ. ಸಾಹಿತ್ಯದಲ್ಲಿ ಮೊತ್ತಮೊದಲು ಈತ ಮಾಡಿದ ಕೆಲಸವೆಂದರೆ ಹೊಸದೊಂದು ಛಂದಸ್ಸನ್ನು ಬಳಕೆಗೆ ತಂದುದು; ಮತ್ತು ಆಗಲೇ ಬಳಕೆಯಲ್ಲಿ ಹಿಂದುಳಿದಿದ್ದ ಚರ್ಚ್ ಸ್ವವೊನಿಕ್, ಇನ್ನೂ ರೂಪುಗೊಂಡಿರದಿದ್ದ ರಷ್ಯನ್ ಇವೆರಡನ್ನೂ ಸೇರಿಸಿ ಹೊಸ ಭಾಷೆಯನ್ನು ರೂಪುಗೊಳಿಸಿದುದು. ಭಾಷೆಯಲ್ಲಿ ಉತ್ತಮ, ಮಧ್ಯಮ, ಕೆಳಬಗೆಯ ಭಾಷೆಗಳೆಂಬ ವಿಂಗಡಣೆಯನ್ನು ಮಾಡಿದ. ಕವಿಯಾಗಿ ಈತನ ಕೀರ್ತಿ ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದಿದೆ. ಈತನ ತಾತ್ತ್ವಿಕ ಪ್ರಗಾಥಗಳು-ದೈವಿಕ ಭವ್ಯತೆಯನ್ನು ಕುರಿತು ಎರಡು ಪ್ರಗಾಥಗಳು-ಇವು ಈತನ ಅತ್ಯುತ್ತಮ ಕವನಗಳು. ಈತನ ನೀತಿ ಬೋಧಕ ಪತ್ರಗಳ ಭಾಷೆಗೂ ಪ್ರಗಾಥಗಳ ಭಾಷೆಗೂ ವ್ಯತ್ಯಾಸವಿದೆ. ರಷ್ಯನ್ ಭಾಷೆಯಲ್ಲಿ ಪವಿತ್ರ ಗ್ರಂಥಗಳ ಬಳಕೆ ಎನ್ನುವುದು ಈತನ ಗಮನಾರ್ಹ ಕೃತಿ.

(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ